ನದಿಯಾ
ಭಾರತದ ಪಶ್ಚಿಮ ಬಂಗಾಲ ರಾಜ್ಯದಲ್ಲಿಯ ಪೂರ್ವ ಗಡಿ ಜಿಲ್ಲೆಗಳಲ್ಲೊಂದು. ಜಲ್ಪೈಗುರಿ ವಿಭಾಗದಲ್ಲಿದೆ. ವಿಸ್ತೀರ್ಣ 3,926 ಚ.ಕಿಮೀ. ಜನಸಂಖ್ಯೆ 22,30,270 (1971). ಸ್ವಾತಂತ್ರ್ಯಪೂರ್ವದ ಅಖಂಡ ಬಂಗಾಲ ಪ್ರಾಂತ್ಯದ ನದಿಯಾ ಜಿಲ್ಲೆಯಲ್ಲಿದ್ದ ಭೈರವ ನದಿಯ ಈಶಾನ್ಯಭಾಗಗಳನ್ನು ಪೂರ್ವ ಪಾಕಿಸ್ತಾನಕ್ಕೆ (ಈಗ ಬಾಂಗ್ಲಾ ದೇಶ) ಕೊಟ್ಟ ಅನಂತರ (1947) ಉಳಿದ ಭಾಗ ಈಗಿನ ನದಿಯಾ ಜಿಲ್ಲೆಯಾಗಿದೆ.

	ಗಂಗಾ ನದಿಯ ಮುಖಜಪ್ರದೇಶದ ಪ್ರಾರಂಭದಲ್ಲಿರುವ ನದಿಯಾ ಜಿಲ್ಲೆಗೆ ಗಂಗೆಯ ಶಾಖೆಗಳಾದ ಭಾಗೀರಥಿ, ಜಲಂಗಿ, ಮಾತಭಾಂಗಾ ಮೊದಲಾದ ನದಿಗಳಿಂದ ನೀರು ಒದಗುತ್ತದೆ. ನೆರೆಗಳೊಡನೆ ನದಿಗಳು ತಂದ ರೇವೆ ಮಣ್ಣಿನಿಂದ ನಿರ್ಮಿತವಾದ ಈ ಹುಲುಸುಭೂಮಿಯ ಸ್ತರ ಈಗ ಏರಿರುವುದರಿಂದ ಇದು ದೊಡ್ಡ ನೆರೆಗಳು ಬಂದಾಗ ಮಾತ್ರವೇ ಮುಳುಗುತ್ತದೆ. ಆದ್ದರಿಂದ ಈ ನದಿಗಳು ಫಲವತ್ತಾಗಿ ರೇವೆ ಮಣ್ಣನ್ನು ತಂದು ಇಲ್ಲಿಯ ನೆಲದ ಮೇಲೆ ತುಂಬುತ್ತಿಲ್ಲ. ತತ್ಪರಿಣಾಮವಾಗಿ ಇಲ್ಲಿಯ ನೆಲ ಈಗ ನಿಸ್ಸಾರವಾಗಿ, ಬೆಳೆ ಕುಗ್ಗುತ್ತಿದೆ. ಈ ನದಿಗಳು ಹಿಂದೆ ಗಂಗಾಮುಖಕ್ಕೂ ಸಮುದ್ರಕ್ಕೂ ಸಾಗಲು ಮುಖ್ಯ ಜಲಮಾರ್ಗಗಳಾಗಿದ್ದುವು. ಆದರೆ ಈ ನದಿಗಳ ಪಾತ್ರ ಈಗ ತೆಟ್ಟೆಯಾಗಿರುವುದರಿಂದ ಇವು ಜಲಸಂಚಾರಕ್ಕೆ ಯೋಗ್ಯವಾಗಿಲ್ಲ. ಫರಕ್ಕಾ ಕಟ್ಟೆಯಿಂದ ಈ ಜಿಲ್ಲೆಯ ಕೃಷಿಗೆ ಹೆಚ್ಚಿನ ಸಹಾಯ ಒದಗಬಹುದು.

	ನದಿಯಾದ ಮುಖ್ಯ ಆಹಾರ ಬೆಳೆ ಬತ್ತ. ಇತರ ಬೆಳೆಗಳೂ ಸಣಬು, ಕಬ್ಬು ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳು. ಸೆಣಬು, ಜವಳಿ, ಸಕ್ಕರೆ, ಎಣ್ಣೆ ಸಂಸ್ಕರಣ ಇವು ಜಿಲ್ಲೆಯ ಮುಖ್ಯ ಕೈಗಾರಿಕೆಗಳು. ಒಂದು ಕಾಲದಲ್ಲಿ ಇಲ್ಲಿಯ ಹತ್ತಿಬಟ್ಟೆಗಳು ಪ್ರಸಿದ್ಧವಾಗಿದ್ದವು. ಈಸ್ಟ್ ಇಂಡಿಯ ಕಂಪನಿ ಇವಕ್ಕೆ ದೊಡ್ಡ ಗಿರಾಕಿಯಾಗಿತ್ತು.

	ಜಿಲ್ಲೆಯ ಮುಖ್ಯಸ್ಥಳ ಕೃಷ್ಣನಗರ. ಇನ್ನೊಂದು ಪ್ರಸಿದ್ಧ ಸ್ಥಳ ನವದ್ವೀಪ (ನೋಡಿ- ನವದ್ವೀಪ). ಕೃಷ್ಣನಗರ ಮತ್ತು ನವದ್ವೀಪ ಎರಡರಲ್ಲೂ ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜುಗಳಿವೆ.					(ಪಿ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ